ಕಾಳಗಿ

ಗುಲ್ಬರ್ಗ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಒಂದು ಗ್ರಾಮ. ಗುಲ್ಬರ್ಗದಿಂದ ಪೂರ್ವಕ್ಕೆ ಸು. 32ಕಿಮೀ ದೂರದಲ್ಲಿದೆ. ಇದು 11ನೆಯ ಶತಮಾನದಲ್ಲಿ ಕಲ್ಯಾಣದ ಚಾಳುಕ್ಯರ ಆಳಿಕೆಯಲ್ಲಿ ಕಾಳುಗೆ ಎಂಬ ಹೆಸರಿನಿಂದ ಮನ್ನೆದಡಿ 1000 ನಾಡಿನ ರಾಜಧಾನಿಯಾಗಿ ಪ್ರಸಿದ್ಧವಾಗಿತ್ತು. ತ್ರೈಲೋಕ್ಯಮಲ್ಲ ಸೋಮೇಶ್ವರನ ಆಳಿಕೆಯಲ್ಲಿ ವಾರಣಕುಲಕ್ಕೆ ಸೇರಿದ ಮಹಾಮಂಡಲೇಶ್ವರ ದಿಬ್ಬರಸ ಈ ಪ್ರಾಂತ್ಯವನ್ನು ಆಳುತ್ತಿದ್ದ. ಬಹುಶಃ ಅವನ ಕಾಲದಲ್ಲಿ ಅವನ ಹೆಸರಿನಿಂದ ಬಿಡ್ಡೇಶ್ವರ (ದಿಬ್ಬೇಶ್ವರ) ದೇವಾಲಯವನ್ನು ಇಲ್ಲಿ ನಿರ್ಮಿಸಲಾಗಿದೆ. 12ನೆಯ ಶತಮಾನದಲ್ಲಿ ಕಳಚುರಿ ರಾಯಮುರಾರಿ ಸೋವಿದೇವ ಆಳುತ್ತಿದ್ದಾಗ ಬಾಣವಂಶದ ವೀರಗೊಂಕರಸ ಮನ್ನೆದಡಿ ನಾಡನ್ನು ಇಲ್ಲಿಂದ ಆಳುತ್ತಿದ್ದು ಬಹುಶಃ ತನ್ನ ತಂದೆ ಉದಯಾದಿತ್ಯ ವೀರಕಾಳರಸನ ಹೆಸರಿನಲ್ಲಿ ಸ್ವಯಂಭು ಕಾಳೇಶ್ವರ ದೇವಾಲಯವನ್ನು ನಿರ್ಮಿಸಿ ಅನೇಕ ದತ್ತಿಗಳನ್ನು ಬಿಟ್ಟಂತೆ ತೋರುತ್ತದೆ. ಕಾಳೇಶ್ವರ ದೇವಾಲಯಕ್ಕೆ ಮನ್ನೆದಡಿ 1000ಕ್ಕೆ ಸೇರಿದ್ದ ನೂರುಂಬಾಡ ಪ್ರಾಂತ್ಯದ ಪ್ರತಿಯೊಂದು ಹಳ್ಳಿಯಿಂದ ಒಂದು ಗದ್ಯಾಣವನ್ನು ದತ್ತಿಯಾಗಿ ಹಿರಿಯ ದಂಡನಾಯಕ ಮಾಧವಯ್ಯ ಬಿಟ್ಟುದಾಗಿ ಶಾಸನವೊಂದರಿಂದ ತಿಳಿದುಬರುತ್ತದೆ. 13ನೆಯ ಶತಮಾನದ ಅನಂತರ ಈ ಊರು ತನ್ನ ಪ್ರಾಮುಖ್ಯವನ್ನೂ ಕಳೆದುಕೊಂಡಿತು.

 ಮೇಲೆ ತಿಳಿಸಿದ ದಿಬ್ಬೇಶ್ವರ ಕಾಳೇಶ್ವರ ದೇವಾಲಯಗಳಲ್ಲದೆ ಚಾಳುಕ್ಯ ಮತ್ತು ಕಳಚುರಿಗಳ ಕಾಲದಲ್ಲಿ ಸೋಮೇಶ್ವರ, ಜಯಲಿಂಗೇಶ್ವರ ದೇವಾಲಯ ಮೊದಲಾದ ಹಲವು ದೇವಾಲಯಗಳು ಇಲ್ಲಿ ನಿರ್ಮಿತವಾದುದಾಗಿ ಶಾಸನಗಳು ತಿಳಿಸುತ್ತವೆ. ಆದರೆ ಈ ದೇವಾಲಯಗಳು  ಜೀರ್ಣಾವಸ್ಥೆಯಲ್ಲಿವೆ. ಕೆಲವು ನಾಮಾವಶೇಷವಾಗಿವೆ. ದೇವಾಲಯಗಳ ಶಿಲ್ಪಗಳು, ಗೋಡೆ ಚಾವಣಿಗಳ ಭಾಗಗಳು, ಇತರ ಶಿಲಾಫಲಕಗಳು ಊರಿನ ಸುತ್ತ ಚೆಲ್ಲಾಡಿವೆ. ಇವುಗಳಲ್ಲಿ ತಕ್ಕಮಟ್ಟಿಗೆ ಉಳಿದುಬಂದಿರುವ ದೇವಾಲಯವೆಂದರೆ ಕಾಳಮೇಶ್ವರ ಅಥವಾ ಕಾಳೇಶ್ವರ ದೇವಾಲಯ. ಆದರೆ ಮೂಲ ದೇವಾಲಯಕ್ಕೆ ಅನಂತರದ ಕಾಲದಲ್ಲಿ ಕೆಲವು ಭಾಗಗಳನ್ನು ಸೇರಿಸಿರುವುದಲ್ಲದೆ ದೇವಸ್ಥಾನಕ್ಕೆ ಪೂರ್ಣವಾಗಿ ಸುಣ್ಣ ತುಂಬಿರುವುದರಿಂದ ಅದರ ಮೂಲ ಸೌಂದರ್ಯ ಬಹಳ ಮಾಸಿದೆ ಎನ್ನಬಹುದು. ಆದರೂ ಈ ದೇವಾಲಯದ ಹೊರಗೋಡೆಗಳ ಮೇಲೆ ಇರುವ ಸುಂದರವಾದ ಭಂಗಿಗಳಲ್ಲಿ ನಾಟ್ಯಮಗ್ನರಾಗಿರುವ ಸ್ತ್ರೀಮೂರ್ತಿಗಳ ಉಬ್ಬು ಶಿಲ್ಪಗಳು ಆಕರ್ಷಕವಾಗಿವೆ. ಇವುಗಳಲ್ಲಿನ ಒಂದು ವಿಶೇಷವೆಂದರೆ ಈ ಕೆಲವು ಮೂರ್ತಿಗಳ ಮೇಲೆ ಅಪರೂಪವಾಗಿ ಕಿರುಶಾಸನಗಳಿದ್ದು ಆ ಮೂರ್ತಿಗಳ ಭಾವಭಂಗಿಗಳನ್ನು ಅವುಗಳನ್ನು ಕಂಡರಿಸಿರುವ ಉದ್ದೇಶವನ್ನು ವಿವರಿಸುತ್ತವೆ. ಸಾಮಾನ್ಯವಾಗಿ ಈ ಕಿರುಶಾಸನಗಳು ನೀಲಕಂಠನನ್ನು ಬಗೆಬಗೆಯಾಗಿ ಅಲ್ಲಿ ಕಂಡರಿಸಿರುವ ಸ್ತ್ರೀಯರು ವರ್ಣಿಸುತ್ತಿರುವುದನ್ನು ಸೂಚಿಸುತ್ತವೆ. ವೀಣೆಯನ್ನು ನುಡಿಸಿ ಹಾಡುತ್ತಿರುವ ಸ್ತ್ರೀಮೂರ್ತಿಯ ಶಿಲ್ಪವೊಂದರ ಮೇಲಿನ ಶಾಸನ 'ಧರೆಯೊಳಗೆ ನೀಲಕಂಠನೆ ಸುಜನಂ ಧಾರ್ಮಿಕನೆಂದು ಒರಳಿ ವಸಂತಂ ಗುಜರಿ ಸಿರಿರಾಗದೆ ವೀಣಾಕಾರ್ತಿ ಪಾಡುತ್ತುಮಿರ್ದಳ್' ಎಂದಿದೆ. ಇಲ್ಲಿ ಹೆಸರಿಸಿರುವ ಕೆಲವು ರಾಗಗಳು ಗಮನಿಸತಕ್ಕವಾಗಿವೆ. ಮೋಹಕ ಭಂಗಿಯಲ್ಲಿ ನಿಂತು ಮುಂಗೈ ಮೇಲೆ ಕುಳಿತಿರುವ ಗಿಳಿಯೊಂದನ್ನು ನುಡಿಸುತ್ತಿರುವ ಸ್ತ್ರೀಮೂರ್ತಿಯ ಮೇಲಿನ ಒಂದು ಶಾಸನ, 'ಲಲಿತಾಂಗಿ ಆಡಿಸುತ್ತಿರೆ ಗಿಳಿಯಾಡಿತು. ನೀಲಕಂಠನ್ ಈ ಬಂಧಂ ನೀವೇಳಿರೆ ಏಳಿರೆ ತೋರಣಂಗೂಡಿ ಕಳಸಕನ್ನಡಿಯಿಂದ ಇದಿರುಗೊಳ್ವುದು' ಎಂದು ವರ್ಣಿಸಿದರೆ, ಮತ್ತೊಂದರಲ್ಲಿ ಬುಧಾಗ್ರಣಿ ನೀಲಕಂಠನನ್ನು ಮನೋನುರಾಗದಿಂದ ಬಗೆಬಗೆಯಾಗಿ ವರ್ಣಿಸಿ ಸರಸ್ವತಿಯಂತೆ ಆಡುತ್ತಿರುವ ಮೂರ್ತಿಯ ವರ್ಣನೆ ಇದೆ. ಹೀಗೆ ಶಾಸನಗಳನ್ನುಳ್ಳ ಶಿಲಾಬಾಲಿಕೆಯ ಮೂರ್ತಿಗಳಿರುವುದು ಚಾಳುಕ್ಯ ಶಿಲ್ಪದಲ್ಲಿ ಅಪರೂಪವೇ. ಉಳಿದಂತೆ ದೇವಾಲಯದ ದ್ವಾರಗಳು, ಕಂಬಗಳು, ಒಳಚಾವಣಿಯ ಶಿಲ್ಪಗಳು ಇತರ ಸಾಮಾನ್ಯವಾದ ಚಾಳುಕ್ಯ ದೇವಾಲಯಗಳಲ್ಲಿರುವಂತೆಯೇ ಇವೆ.

 ಈ ದೇವಾಲಯದ ಮುಂದೆ ಕೆಲವು ಗಜಗಳ ಅಂತರದಲ್ಲಿ ನಿಂತಿರುವ ದೇವಾಲಯವೇ ಇಲ್ಲಿನ ಅತ್ಯಂತ ಪ್ರಾಚೀನ ದಿಬ್ಬೇಶ್ವರ ದೇವಾಲಯವಿರಬಹುದು. ಎತ್ತರವಾದ ಜಗತಿಯ ಮೇಲೆ ಮೂರು ಗರ್ಭಗೃಹಗಳು, ಮೂರು ಸುಕನಾಸಿಗಳು, ನಡುವೆ ಒಂದು ನವರಂಗ, ಮುಂದೆ ಒಂದಂಕಣದ ಮುಖಮಂಟಪಗಳಿವೆ. ಹೊರಗೋಡೆಗಳು ಕಚ್ಚುಕಚ್ಚಾಗಿ ಉಬ್ಬಿದ ಆಯಾಕಾರದ ಗೋಡೆಗಳಿಂದ ಕೂಡಿವೆ. ಚಾಳುಕ್ಯರ ಕಾಲದ ದೇವಾಲಯಗಳ ತಳವಿನ್ಯಾಸದಲ್ಲಿ ಇದು ಅಪರೂಪವಾದುದೆನಿಸಿದೆ. ಹೊರಗೋಡೆಗಳ ಮೇಲೆ ಹೆಚ್ಚು ಉಬ್ಬಿನಿಂತಿರುವ ಸುಂದರವಾದ ಮೂರ್ತಿಗಳನ್ನು ಕಾಣಬಹುದು. ಆದರೆ ದೇವಾಲಯ ಅತ್ಯಂತ ಜೀರ್ಣಾವಸ್ಥೆಯಲ್ಲಿದೆ.

 ಈಗ ಊರು ಈ ದೇವಾಲಯಗಳಿರುವ ಹಳೆಯ ನಿವೇಶನದಿಂದ ಸ್ವಲ್ಪ ದೂರದಲ್ಲಿದೆ. ಅಲ್ಲಿಯೂ ಮಲ್ಲಿಕಾರ್ಜನ ದೇವಾಲಯ, ಚೌಡೇಶ್ವರಿ ಗುಡಿ, ಆಂಜನೇಯನ ಗುಡಿಗಳಿವೆ. ಆದರೆ ವಾಸ್ತುಶಿಲ್ಪ ದೃಷ್ಟಿಯಿಂದ ಇವು ಸಾಮಾನ್ಯ ರಚನೆಗಳು.

 ಕಾಳಗಿ ಒಂದು ಯಾತ್ರಾಸ್ಥಳ. ಇಲ್ಲಿನ ಕಾಳೇಶ್ವರ ಮತ್ತು ನರಸಿಂಹ ದೇವಾಲಯಗಳು ವರ್ಷವಿಡೀ ಈ ಸುತ್ತಿನ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತವೆ. ಮೇ ತಿಂಗಳಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ.   

 (ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ